ಕಬ್ಬಿನ ಕಥೆ


*ಕಬ್ಬಿನ ಕಥೆ* 


ನಾನಂದು ಕಬ್ಬಿನ ಮೊಗ್ಗಾಗಿದ್ದೆ 

ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದೆ 

ಯಾರೋ ಬಲೂ ಪ್ರೀತಿಯಿಂದ 

ಕೈಗೆತ್ತಿಕೊಂಡು .........

ಎಷ್ಟು ಚೆನ್ನಾಗಿದೆ !!!

ಎಷ್ಟು ಆರೋಗ್ಯವಂತವೂ ಆಗಿದೆ 

ಎಂದು ಹೊಗಳಿ ಅಟ್ಟಕ್ಕೇರಿಸಿದರು 


ನನ್ನ ಮನಸ್ಸು ಖುಷಿಯಿಂದ 

ಕ್ಷೀರ ಸಾಗರದಲ್ಲಿ ತೇಲಿದಂತಾಗಿ 

ಕಣ್ಮುಚ್ಚಿದೆ !!!

ಕ್ಷಣ ಮಾತ್ರದಲ್ಲಿ ಕೈಗೆತ್ತಿಕೊಂಡವನು 

ದೊಪ್ಪನೆ ಹದ ಮಾಡಿ ಸಿದ್ಧವಿಟ್ಟ 

ಮಣ್ಣಿಗೆ ಒಗದೇ ಬಿಟ್ಟ 

ಸಾಬೂನ ಹಚ್ಚಿ ತೊಳೆದು 

ಮುಖಕ್ಕೆ ಪೌಡರ್ ಹಚ್ಚಿ 

ಮುದ್ದಿಸಿ ಮುದ್ದಿಸಿ 

ಮುಳ್ಳಿನ ಕಡ್ಡಿಯಿಂದ 

ತುಸು ಗೀರಿದಂತೆ ಆಯಿತು 

ನನ್ನ ಹಣೇ ಬರಹ


ಎತ್ತಿ ಎಸೆದಾಗಲೇ ಅಂದುಕೊಂಡೆ 

ಅವನೊಬ್ಬ ಕೂಲಿ ಎಂದು 

ಸಾಕಷ್ಟು ಶಪಿಸಿದೆ 

ನಾಶವಾಗಲೆಂದು 

ಹರಸಿ ಮುಖ ಮುರಿದೆ 


ಮಾಲಿಕನಿಗೆ ನಾನೆಂದರೆ 

ಬಲೂ ಪ್ರೀತಿ ....

ಮುದ್ದು ಮಕ್ಕಳಿಗೆ ಹಾಲುಣಿಸಿದಂತೆ 

ನೀರು ಗೊಬ್ಬರ ಹಾಕುತ್ತಿದ್ದ 

ಒಂದು ದಿನವೂ !!

ನನ್ನ ನೋಡದೆ ಇರುತ್ತಿರಲಿಲ್ಲ

ಅವನ ಪ್ರೀತಿ ಮಮತೆಗೆ 

ಕೊಬ್ಬಿದ ಕುರಿಯಂತಾದೆ ...


ಕೃಷ್ಣನ ತಲೆಯಲ್ಲಿರುವ 

ನವಿಲು ಗರಿಯಂತೆ 

ನನಗೂ ಗರಿಗಳು 

ಹಚ್ಚ ಹಸಿರಿನಿಂದ ಮೂಡಿದವು

ಇಂದ್ರನಲ್ಲಿರುವ ವಜ್ರಾಯುದದಂತೆ 

ದೇಹವೂ ಬೆಳೆಯಿತು ...


ನದಿ ಉಕ್ಕಿ ಹರಿಯುವಾಗ 

ಊರ ಜನರೆಲ್ಲ 

ನದಿಯ ಸಂಭ್ರವನ್ನು 

ನೋಡಿ ಆನಂದಿಸುವಂತೆ 

ಮನೆ ಮಂದಿಯಲ್ಲಾ 

ಬಂದು ನೋಡಿ ಆನಂದಿಸಿ 

ಪುಷ್ಪ ಪತ್ರೆಗಳನ್ನೂ ಇಟ್ಟು 

ಸಿಂಗರಿಸಿ .......

ದೂಪ ದೀಪವನ್ನು ಹಚ್ಚಿದರು 


ಸ್ವಲ್ಪ ದಿನಗಳ ನಂತರ ....

ಮಾಲೀಕ ಅದೇನೋ ವಿಚಿತ್ರ 

ದ್ರಾವಣವನ್ನು ಸಿಂಪಡಿಸಿದ 

ಗಬ್ಬು ವಾಸನೆ ತಡೆಯಲಾಗಲಿಲ್ಲ 

ಆದರೂ ಮೈಮೇಲೆ ಮೂಡಿದ 

ಕೆಲವು ಕಲೆಗಳು ......

ಅದರಿಂದ ದೂರವಾದದ್ದು 

ಅಷ್ಟೇ ಸತ್ಯ !!!


ಒಂದು ದಿನ ಮಾಲಿಕ 

ನನ್ನ ಬಳಿ ಬಂದು 

ಮೈಯನ್ನೆಲ್ಲಾ ತಡವರಿಸಿದ 

ನನಗೆ ಮತ್ತೊಮ್ಮೆ !!!

ಅಂದಾದ ಅನುಭವವೇ ಆಯಿತು 

ಕಣ್ಮುಚ್ಚಿ ಖಷಿಯಿಂದಿರುವಾಗಲೇ 

ಬಿತ್ತು ಮಾಲಿಕನ ಕೈಯಿಂದ 

ನನ್ನ ಬುಡಕ್ಕೆ ಕುಡುಗೋಲಿನ ಏಟು 


ಕಣ್ಮುಚ್ಚಿದ ಕಣ್ಣಿಂದ 

ಹರಿಯಿತು ರಕ್ತ ಕೋಡಿ !!!

ಪ್ರೀತಿಸಿದಾತನೆ 

ಪ್ರಾಣ ಘಾತುಕನಾದನಲ್ಲ 

ಮರೆಯದ ಏಟಿಟ್ಟನಲ್ಲ 

ಕಣ್ಮುಚ್ಚಿದೆ !!!

ಹಾಗೇ ತುಂಬಿದ ಗಾಡಿಗೆ 

ಒರಗಿಕೊಂಡೆ ......


ಕಣ್ಬಿಟ್ಟೊಡೆ ಇಲ್ಲೊಂದು 

ಗಾಣದ ಯಂತ್ರ !!

ಪಕ್ಕದಲ್ಲಿ ಗಾಣಿಗ 


ಅವನೂ ನನ್ನ ಕೈಗೆತ್ತಿಕೊಂಡ 

ಅದೇ ಪ್ರೀತಿ ಅದೇ ಮಮಕಾರ 

ನನಗರ್ಥವಾಯಿತು 

ನನ್ನ ಕಾರ್ಯವೇನಿಲ್ಲಿ ಎಂದು 

ಸಿದ್ಧವಾದೆ !!!

ಕಣ್ಣು ತುಂಬಿಕೊಂಡಿವೆ 

ಅವನು ನನ್ನ ದೇಹ ಸವರುತ್ತಿದ್ದಾನೆ 

ದೇಹಕ್ಕೆ ಖುಷಿಯಾಗುತ್ತಿದೆ 

ಆದರೆ ಮನಸ್ಸು 

ಅಷ್ಟೇ ಗಟ್ಟಿಯಾಗಿದೆ !!

ಗಾಣಿಗನ ಕೈಯಾಳು ನಾನು 

ಎಂಬ ಸತ್ಯ ಬಯಲಾಗಿದೆ 


ಮೊಗ್ಗಾಗಿದ್ದಾಗಿನಿಂದ 

ಕೊನೆಯಂಚಿನವರೆಗೂ 

ಪ್ರೀತಿಯ ಅರ್ಥ ತಿಳಿದಿದೆ 

ಇವನಿಂದ ತಪ್ಪಿಸಿಕೊಂಡರೆ 

ತತ್ವ ಜ್ಞಾನಿಯಾಗಿ 

ಲೋಕವನ್ನೇ ಬದಲಿಸುವ 

ಆಸೆಯೊಂದು ಮೂಡುತ್ತಿದೆ 

ಈಗದು ಸಾಧ್ಯವಿಲ್ಲ !!!

ಆಸೆಯಿಂದ ದುಃಖವೆಂದು 

ಯಾರೋ ಒಬ್ಬ ಸಾಧು 

ನುಡಿದದ್ದು ನೆನಪಿದೆ ನನಗೆ


ಗಾಣಿಗನ ಬಾಯಿ ಬಾಯ್ದೆರೆಯಿತು !!

ಹಿಂಡಿತು ರಕ್ತ ಚಿಮ್ಮಿತು !!

ದೇಹ ತೆಪ್ಪವಾಯಿತು !!

ಸುಸ್ತಾಗಿ ಬಿದ್ದಿರುವೆಯೆಂದು 

ಬಿಡಲಿಲ್ಲ 

ಮತ್ತೆ ಬಂತು ಸರದಿ !!

ಈಗ ಮತ್ತೊಷ್ಟು ದೇಹ ಮುದುಡಿ 

ಬಾಯೊಳಗೆ ಹೋಯಿತು 


ಅಲ್ಪ ಸ್ವಲ್ಪ ಉಳಿದಿದ್ದ 

ರಕ್ತ ಸ್ರವಿಸಲ್ಪಟ್ಟಿತು !!

ಗಾಣಿಗನಿಗೆ ಸಮಾಧಾನವಿಲ್ಲ 

ಮತ್ತೆ ಎರಡು ಮೂರು ಬಾರಿ 

ಅದೇ ಕಾರ್ಯ .........

ಪುನರಾವರ್ತಿತವಾಯಿತು


ರಕ್ತವೆಲ್ಲಾ ಬಸಿದು ಹೋಗಿದೆ 

ಉಸಿರಷ್ಟೇ !!!

ಅದು ಸಹ ಕಡೆ ಗಳಿಗೆಯ

ಬಿಕ್ಕಳಿಕೆಯಷ್ಟೆ .....


ನಾನೀಗ ನಿರುಪಯುಕ್ತ 

ಗಾಣಿಗ ತಿಪ್ಪೆಗೆ ಎಸೆದ 

ತಿಪ್ಪೆಯಲ್ಲಿದ್ದ

ನನ್ನ ಸಾವಿರಾರು ಹಿರಿಯರು 

ಉಸಿರೂ ಇಲ್ಲದೆ ಒಣಗಿದ್ದರು 


ಎಲ್ಲಿಂದಲೋ .....

ಒಂದು ಧ್ವನಿ ಕೇಳಿತು !!

ಕಬ್ಬಿನ ರಸ ರುಚಿಯಾಗಿತ್ತು 

ಕೇಳಿ ನನ್ನದೇ ಇರಬೇಕೆಂದು 

ನಿಟ್ಟುಸಿರು ಬಿಡುತ್ತಲೇ 

ಉಸಿರೂ ಹಾರಿತು ....


ಅಂದಿಗೂ ಇಂದಿಗೂ 

ನನ್ನ ಕಾರ್ಯವೇನೆಂದು 

ನನಗೀಗ ಅರ್ಥವಾಯಾತು 

ಆ ಕೂಲಿಗೆ ಬೈದದ್ದು 

ಪಾಪದ ಗಂಟಾಗಿ 

ಹಾಗೇ ಉಳಿಯಿತು ..


 ಯೋಗೇಂದ್ರಾಚಾರ್ ಎ ಎನ್ 

7259212415

Comments

Post a Comment